ಚರಾಪೂಂಜೀ

ಭಾರತದ ಮೇಘಾಲಯ ರಾಜ್ಯದಲ್ಲಿ ಖಾಸಿ ಮತ್ತು ಜೈಂತಿಯಾ ಬೆಟ್ಟ ಜಿಲ್ಲೆಯಲ್ಲಿರುವ ಒಂದು ಗ್ರಾಮ. ಉ.ಅ. 250 15' ಮತ್ತು ಪೂ.ರೇ. 910 44' ಮೇಲೆ, ಷಿಲಾಂಗಿಗೆ 32 ಮೈ. ದಕ್ಷಿಣದಲ್ಲಿ ಇದೆ. ಷಿಲಾಂಗ್ ಪ್ರಸ್ಥಭೂಮಿಯ ದಕ್ಷಿಣ ಅಂಚಿನಲ್ಲಿರುವ ಈ ಸ್ಥಳದ ಎತ್ತರ ಸಮುದ್ರಪಾತಳಿಯಿಂದ 4,455'. ಅಧಿಕ ಮಳೆ ಬೀಳುವ ಸ್ಥಳವೆಂದು ಚರಾಪೂಂಜೀ ಪ್ರಸಿದ್ಧವಾಗಿದೆ. ಇಲ್ಲಿಯ ವಾರ್ಷಿಕ ಸರಾಸರಿ ಮಳೆ 428". ವಾಸ್ತವವಾಗಿ ವರ್ಷದಿಂದ ವರ್ಷಕ್ಕೆ ಬಹಳ ವ್ಯತ್ಯಾಸವಾಗುತ್ತಿರುತ್ತದೆ. 1861ರಲ್ಲಿ ಒಟ್ಟು 905"-ಜುಲೈ ತಿಂಗಳಲ್ಲೊಂದರಲ್ಲೇ 366"- ಮಳೆಯಾಯಿತು. 1876ರಲ್ಲಿ ಕೇವಲ 24 ಗಂಟೆಗಳಲ್ಲಿ 41" ಮಳೆಯಾದ ದಾಖಲೆಯಿದೆ. ವಿಶ್ವದಲ್ಲಿ ಅತ್ಯಧಿಕ ಮಳೆಯಾಗುವ ಸ್ಥಳ ಚಿರಾಪೂಂಜೀಗೆ ಹತ್ತಿರದಲ್ಲಿರುವ ಮಾವ್ಸಿನ್ರಾಮ್ ಎಂಬ ಹಳ್ಳಿ. ಅಲ್ಲಿಯ ವಾರ್ಷಿಕ ಸರಾಸರಿ ಮಳೆ 550". ಈ ಸ್ಥಳ ಮಾನ್ಸೂನಿಗೆ ಇದಿರಾಗಿ, ವರ್ತುಲ ಪರ್ವತಪಂಕ್ತಿಯ ಮೇಲಿದೆ.

	ಮೊದಲು ಚಿರಾಪೂಂಜೀ ಖಾಸಿ ಮತ್ತು ಜೈಂತಿಯಾ ಪರ್ವತಪ್ರದೇಶಗಳ ಆಡಳಿತ ಕೇಂದ್ರವಾಗಿತ್ತು. ಆನಂತರ ಅದನ್ನು ಇಲ್ಲಿಂದ ಷಿಲಾಂಗಿಗೆ ಸ್ಥಳಾಂತರಿಸಲಾಯಿತು. ಇಲ್ಲಿದ್ದ ಸುಂದರವಾದ ಕಟ್ಟಡಗಳೂ ಬಂಗಲೆಗಳೂ 1897ರ ಭೂಕಂಪದಿಂದ ಹಾನಿಗೊಳಗಾದುವು. ಅತಿಶಯವಾದ ಮಳೆಯಿಂದಾಗಿ ವರ್ಷದುದ್ದಕ್ಕೂ ಇಲ್ಲಿಯ ನಿಸರ್ಗ ರಮಣೀಯವಾಗಿರುತ್ತದೆ. ಈ ಪ್ರದೇಶದಲ್ಲಿ ಉತ್ತಮ ದರ್ಜೆಯ ಕಲ್ಲಿದ್ದಲು ಮತ್ತು ಸುಣ್ಣದ ಕಲ್ಲು ದೊರೆಯುತ್ತವೆ. ಇಲ್ಲಿ 1971-71ರಲ್ಲಿ ಸಿಮೆಂಟ್ ಕಾರ್ಖಾನೆಯೊಂದು ಸ್ಥಾಪಿತವಾಯಿತು. ಖಾಸಿ ಬುಡಕಟ್ಟಿನ ಜನ ಇಲ್ಲಿ ವಾಸವಾಗಿದ್ದಾರೆ. ಇವರು ಪ್ರೋಟೋ-ಆಸ್ಟ್ರಲಾಯಿಡ್ ಗುಂಪಿನವರು. ಇವರದು ಮಾತೃಯಾಜಮಾನ್ಯ ಪದ್ಧತಿಯ ಸಮಾಜ.

	ಇಲ್ಲಿ ಝಂ (ಸರದಿ ಬೆಳೆ) ಮತ್ತು ಮೆಟ್ಟಲು ನೆಲ ವ್ಯವಸಾಯ ಜಾರಿಯಲ್ಲಿದೆ. ಮುಖ್ಯ ಬೆಳೆ ಬತ್ತ, ಬಾಳೆ, ಪ್ಲಂ, ಪೈನಾಪಲ್ ಮತ್ತು ಕಿತ್ತಳೆ ಜಾತಿಯ ಹಣ್ಣುಗಳು ಬೆಳೆಯುತ್ತವೆ. ಚಹ ತೋಟಗಳೂ ಸುತ್ತಮುತ್ತ ಇವೆ.
(ಬಿ.ಎ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ